ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿದೆ. ಬೆಂಗಳೂರು, ಮೈಸೂರು, ಮಂಗಳೂರು ನಗರಗಳಿಂದ ಹಾಗೂ ಪುತ್ತೂರು, ಸುಳ್ಯ, ಧರ್ಮಸ್ಠಳಗಳಿಂದ ಇಲ್ಲಿಗೆ ನೇರ ಬಸ್ಸು ವ್ಯವಸ್ಥೆ ಇದೆ. ಇದು ಅತ್ಯಂತ ಪುರಾತನವಾದ ಸುಪ್ರಸಿದ್ಧ ಸ್ಥಳವಾಗಿದ್ದು ಹೆಚ್ಛು ಕಡಿಮೆ ದಕ್ಷಿಣ ಹಿಂದೂಸ್ಥಾನದ ಎಲ್ಲಾ ವಿಭಾಗಗಳಿಂದಲೂ ಯಾತ್ರಾರ್ಥಿಗಳು ಶ್ರೀ ಸ್ವಾಮಿಯ ದರ್ಶನಾರ್ಥವಾಗಿ ಇಲ್ಲಿಗೆ ಬರುತ್ತಿದಾರೆ.
ಪೌರಾಣಿಕ ಹಿನ್ನೆಲೆ : ಈ ಕ್ಷೇತ್ರವು ಕುಮಾರಧಾರಾ ನದಿಯ ತೀರದಲ್ಲಿದೆ. ತಾರಕಾದಿ ಅಸುರರನ್ನು ನಿಗ್ರಹಿಸಿದ ಶ್ರೀ ಷಣ್ಮುಖ ಸ್ವಾಮಿಯು ತನ್ನ ಶಕ್ತ್ಯಾಯುಧದ ಧಾರೆಯನ್ನು (ಅಲಗನ್ನು) ಈ ತೀರದಲ್ಲಿ ತೊಳೆದುದರಿಂದ ಈ ನದಿಗೆ ಧಾರಾತೀರ್ಥ ಎಂತಲೂ, ಕುಮಾರ ಪರ್ವತದಲ್ಲಿ ಹುಟ್ಟಿ ಹರಿಯುವದರಿಂದ ಕುಮಾರಧಾರಾ ಎಂದು ಕರೆಯುತ್ತಾರೆ.
ದುಷ್ಟ ರಾಕ್ಷಸರ ದಮನಕ್ಕಾಗಿ ಜನ್ಮವೆತ್ತಿದ ಕುಮಾರ ಸ್ವಾಮಿಯು ತಾರಕ, ಸಿಂಹವಕ್ರ, ಗಜಾಸ್ಯ ಮತ್ತು ಶೂರಪದ್ಮಾಸುರರನ್ನು ಯುದ್ಧದಲ್ಲಿ ಸಂಹರಿಸಿ, ಸಕಲ ರಾಕ್ಷಸ ಕುಲವನ್ನು ನಾಶಮಾಡಿ ಗಣೇಶ, ವೀರಬಾಹು ಪ್ರಮುಖರಾದ ಸೋದರರ ಸಹಿತನಾಗಿ ಕುಮಾರ ಪರ್ವತಕ್ಕೆ ಬಂದನು. ಆಗ ದೇವತೆಗಳ ಒಡೆಯನಾದ ಇಂದ್ರನು ತನ್ನ ಮಗಳಾದ ದೇವಸೇನೆಯನ್ನು ಮದುವೆಯಾಗುವಂತೆ ಷಣ್ಮುಖ ಸ್ವಾಮಿಯನ್ನು ಪ್ರಾರ್ಥಿಸುತ್ತಾನೆ. ಕುಮಾರ ಸ್ವಾಮಿಯು ಸಂತುಷ್ಟನಾಗಿ ಒಪ್ಪಲು ಈ ಕುಮಾರಧಾರಾ ತೀರ್ಥದ ತಟದಲ್ಲಿ ಮಾರ್ಗಶಿರ ಶುದ್ಧ ಷಷ್ಟಿಯ ದಿನ ವಿವಾಹ ಮಹೋತ್ಸವವು ಜರಗುತ್ತದೆ. ಅದೇ ಸಂದರ್ಭದಲ್ಲಿ ಅಲ್ಲಿಯೇ ವಾಸಮಾಡಿ ತಪಸ್ಸು ಮಾಡಿಕೊಂಡಿದ್ದ ನಾಗರಾಜನಾದ ವಾಸುಕಿಯ ಪ್ರಾರ್ಥನೆಯನ್ನು ಮನ್ನಿಸಿ ತಾನೂ ದೇವಸೇನಾ ಸಮೇತವಾಗಿ ಒಂದಂಶದಿಂದ ಅವನಲ್ಲಿ ನಿತ್ಯ ಸನ್ನಿಹಿತವಾಗಿ. ಈ ಕ್ಷೇತ್ರದಲ್ಲಿ ನೆಲೆಗೊಳ್ಳುತ್ತೇನೆಂದು ವಾಸುಕಿಯನ್ನು ಹರಸುತ್ತಾನೆ. ಹೀಗೆ ಈ ಕ್ಷೇತ್ರದಲ್ಲಿ ವಾಸುಕಿಯಿಂದ ಸಮೇತವಾಗಿ ಕುಮಾರ ಸ್ವಾಮಿಯು ದೇವಸೇನೆಯಿಂದ ಉಪಚರಿತನಾಗಿ ಪರಮಾನಂದದಿಂದ ವಾಸಮಾಡಿ ಕೊಂಡಿರುವನು.
|