ಪ್ರಾಕೃತಿಕ ಸೌಂದರ್ಯದ ಅದ್ಭುತ ರಮಣೀಯ ದೃಶ್ಯದಿಂದ ಕೂಡಿದ ಸುಬ್ರಹ್ಮಣ್ಯ ಗ್ರಾಮವು ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಇಲ್ಲಿಯ ಪಾವಿತ್ರತೆಯು ಹಾಗೂ ದೇವ ಸಾನ್ನಿದ್ಯವು ಅತಿ ವಿರಳ ಸ್ಥಳಗಳಲ್ಲಿ ಮಾತ್ರ ಕಾಣಬಹುದಾಗಿದ್ದು,, ಹೆಮ್ಮೆ ಪಡುವಂತಾಗಿದೆ. ಇಲ್ಲಿಯ ದೇವಸ್ಥಾನವು ಊರಿನ ಮಧ್ಯದಲ್ಲಿದ್ದು ನದಿ - ಕಾಡು - ಪರ್ವತಗಳಿಂದ ಅಮೃತವಾಗಿದ್ದು ಪ್ರಕೃತಿಯ ಅಪ್ರತಿಮ ಸೌಂದರ್ಯಕ್ಕೆ ಭಾಶ್ಯದಂತಿದೆ. ಶ್ರೀ ಸುಬ್ರಹ್ಮಣ್ಯ ದೇವರು ಇಲ್ಲಿಯ ದೇವಳದ ಪ್ರಧಾನ ದೇವತೆ . ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದೆ . ಭಕ್ತಾದಿಗಳು ಮುಖ್ಯ ಗೋಪುರವಿರುವ ಪಶ್ಚಿಮ ಬಾಗಿಲಿನಿಂದ ಪ್ರವೇಶಿಸಿ ಒಳಸುತ್ತನ್ನು ಪೂರ್ವ ಬಾಗಿಲಿನಿಂದ ಮುಂದುವರಿಸುತ್ತಾರೆ . ಗರ್ಭಗುಡಿಯ ಮಧ್ಯಭಾಗದಲ್ಲಿ ಶ್ರೀ ದೇವರ ಮೂರ್ತಿಯಿದೆ . ಅದರ ಮೇಲಿನ ಹಂತದಲ್ಲಿ ಶ್ರೀ ಸುಬ್ರಹ್ಮಣ್ಯ ಮೂರ್ತಿ ಮತ್ತೆ ವಾಸುಕಿ ಹಾಗೂ ಕೆಳ ಹಂತದಲ್ಲಿ ಆದಿಶೇಷನ ಮೂರ್ತಿಗಳಿವೆ . ಭಕ್ತಾದಿಗಳು ಒಳ ಸುತ್ತನ್ನು ಪ್ರವೇಶಿಸುವಾಗ ತಮ್ಮ ಶರ್ಟು , ಬನಿಯಾನುಗಳನ್ನು ತೆಗೆಯಬೇಕಾಗುವುದು . ಈ ದೇವಳವು ಕರ್ನಾಟಕ ಸರಕಾರದ ಮುಜರಾಯಿ ( ಧಾರ್ಮಿಕ ದತ್ತಿ ) ಇಲಾಖೆಗೆ ಒಳಪಟ್ಟಿದೆ . ಇದು ನಾಗಗಳ ವಾಸಸ್ಥಾನವಾಗಿದೆ . ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುವುದು . ಹಾಗಾಗಿ ಈ ಸ್ಥಳವು ಎಲ್ಲಾ ತರಹದ ನಾಗದೋಷಗಳ ಪರಿಹಾರ ಸ್ಥಳವಾಗಿ ನಂಬಲಾಗಿದೆ . ದೇಶದ ಮೂಲೆ - ಮೂಲೆಗಳಿಂದ ಸರ್ಪಸಂಸ್ಕಾರ , ನಾಗಪ್ರತಿಷ್ಠೆ , ಆಶ್ಲೇಷಬಲಿ ಹಾಗೂ ಇತರ ಪೂಜಾದಿಗಳನ್ನು ಸಲ್ಲಿಸಲು ಭಕ್ತಾದಿಗಳು ಬರುತಿರುತ್ತಾರೆ .
|